ಹುಬ್ಬಳ್ಳಿ: ಶಾಸಕ ಅರವಿಂದ ಬೆಲ್ಲದ ಪ್ರತಿಕೃತಿ ದಹನ
1 min read
ಹುಬ್ಬಳ್ಳಿ: ಕನ್ನಡ ಹೋರಾಟಗಾರರನ್ನ ರೋಲ್ ಕಾಲ್ ಗಳೆಂದು ಹೇಳಿಕೆ ನೀಡಿದ್ದ ಶಾಸಕ ಅರವಿಂದ ಬೆಲ್ಲದ ಕ್ರಮವನ್ನ ಖಂಡಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿ, ಶಾಸಕರ ಪ್ರತಿಕೃತಿ ದಹನ ಮಾಡಿದರು.
ಕನ್ನಡ ಹೋರಾಟಗಾರರು ಡಿಸೆಂಬರ್ 5ರಂದು ಕರ್ನಾಟಕ ಬಂದ್ ಕರೆ ನೀಡಿರುವ ಪ್ರಕರಣ ರಾಜ್ಯದಲ್ಲಿ ಬೇರೆಯದ್ದೇ ಸ್ವರೂಪ ಪಡೆಯುತ್ತಿದ್ದು, ಪ್ರತಿ ದಿನವೂ ಈ ಬಗ್ಗೆ ಹಲವು ವಿವಾದಗಳು ಕೇಳಿ ಬರತೊಡಗಿವೆ. ಈ ಬಂದ್ ಕರೆಯ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಹೋರಾಟಗಾರರನ್ನ ರೋಲ್ ಕಾಲ್ ಗಳು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಶಾಸಕ ಅರವಿಂದ ಬೆಲ್ಲದ ಕೂಡಾ, ಅದೇ ಥರನಾದ ಹೇಳಿಕೆಯನ್ನ ನೀಡಿದ್ರು.
ಇಬ್ಬರು ಶಾಸಕರ ಹೇಳಿಕೆಯನ್ನ ಖಂಡಿಸಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶವ್ಯಕ್ತಪಡಿಸಿದರು. ಕನ್ನಡದ ಉಳಿವಿಗಾಗಿ ಹೋರಾಟ ಮಾಡುವವರು ರೋಲ್ ಕಾಲ್ ಗಳು ಅಲ್ಲ, ಬದಲಿಗೆ ಜನರ ಹಣವನ್ನ ಲೂಟಿ ಹೊಡೆಯುವವರು ರೋಲ್ ಕಾಲ್ ಗಳು ಎಂದು ಛೇಡಿಸಿದರು.
ಸಂಜೀವ ದುಮ್ಮಕನಾಳ, ಮಂಜುನಾಥ ಲೂತಿಮಠ, ರವಿ ಕದಂ, ಬಸವರಾಜ ಮಣ್ಣೂರಮಠ, ಗುರುರಾಜ ಅಂಗಡಿ, ಕುಬೇರ ಪವಾರ, ಸತೀಶ ಶೆಟ್ಟಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.