ಕರಡಿಗುಡ್ಡದಲ್ಲಿ ಮನೆಗೆ ಬೆಂಕಿಯಿಟ್ಟ ಕಿರಾತಕರು: ಚುನಾವಣೆ ವೈಷಮ್ಯ
1 min read
ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಮುಗಿದ ತಕ್ಷಣವೇ ಎಲ್ಲರೂ ತಮ್ಮ ತಮ್ಮ ಮನೆಗೆ ಹೋಗುತ್ತಿರುವ ಸಮಯದಲ್ಲೇ ರಾಜಕೀಯ ಪ್ರಮುಖರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಹೊರವಲಯದಲ್ಲಿರುವ ಚೆನ್ನಬಸಪ್ಪ ಹನಿ ಎಂಬುವವರಿಗೆ ಮನೆಗೆ ಬೆಂಕಿ ಹಚ್ಚಲಾಗಿದ್ದು, ನಾಲ್ಕು ದನಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹತ್ತಿ ಹಾಗೂ ದವಸಧಾನ್ಯಗಳು ಸುಟ್ಟು ಕರಕಲಾಗಿವೆ.
ಘಟನೆಯ ಸುದ್ದಿ ತಲುಪಿದ ಕೆಲವೇ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಳಿದುಳಿದ ವಸ್ತುಗಳನ್ನ ಸಂರಕ್ಷಣೆ ಮಾಡಲು ಹರಸಾಹಸ ಪಡುವಂತಾಯಿತು. ಆದರೆ, ದನಗಳನ್ನ ಉಳಿಸಿಕೊಳ್ಳಲು ಆಗಲಿಲ್ಲ.
ಘಟನೆಯನ್ನ ನೋಡಿ ಮನೆಯ ಮಾಲೀಕರು ರೋಧಿಸಿ, ತಮ್ಮ ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದರು. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ದ್ವೇಷವೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದ್ದು, ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.