ಕಲಘಟಗಿ ಶಾಸಕರ ಊರಲ್ಲೇ ‘ಮುದುಡಿದ ಕಮಲ’ ಬೆಂಬಲಿತರು
1 min read
ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಮಾಜಿ ಶಾಸಕ ಸಂತೋಷ ಲಾಡ ಬಣ ಯಶಸ್ವಿಯಾಗಿದ್ದು, ಹಾಲಿ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣನವರ ಅವರ ಊರಲ್ಲೂ ಕೈ ಬೆಂಬಲಿತರು ಕಮಾಲ್ ಮಾಡಿ, ಕಮಲದ ಬೆಂಬಲಿತರು ಮುದುಡಿದ್ದಾರೆ.
ಮಡಕಿಹೊನ್ನಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಂಗೇದೇವರಕೊಪ್ಪ ಗ್ರಾಮ ಕಲಘಟಗಿ ಹಾಲಿ ಶಾಸಕ ಸಿ.ಎಂ.ನಿಂಬಣ್ಣನವರ ಸ್ವಂತ ಊರು. ಇಲ್ಲಿದ್ದ ಮೂವರು ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿತರು ಗೆದ್ದು ಬಂದಿದ್ದಾರೆ. ಅಷ್ಟೇ ಅಲ್ಲ, ಹಿಂಡಸಗೇರಿ ಗ್ರಾಮವನ್ನ ಒಳಗೊಂಡ ಮಡಕಿಹೊನ್ನಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 10 ಸ್ಥಾನಗಳ ಪೈಕಿ 9 ಸ್ಥಾನಗಳನ್ನ ಕಾಂಗ್ರೆಸ್ ಬೆಂಬಲಿತರು ಪಡೆದುಕೊಂಡು ಇತಿಹಾಸ ನಿರ್ಮಿಸಿದ್ದಾರೆ.
ಮಡಕಿಹೊನ್ನಿಹಳ್ಳಿ ಗ್ರಾಮ ಪಂಚಾಯತಿ ನಿರ್ಮಾಣವಾದ ಮೇಲೆ ಮೊದಲ ಬಾರಿಗೆ ಕಾಂಗ್ರೆಸ್ ಬೆಂಬಲಿತರು ಇಲ್ಲಿ ಅಧಿಕಾರ ಪಡೆದಿದ್ದಾರೆ. ಈ ಮೂಲಕ ಹಾಲಿ ಶಾಸಕರ ಊರಲ್ಲೇ ಕಮಲ ಮುದುಡುವಂತೆ ಮಾಡಿದ್ದು, ಮಾಜಿ ಸಚಿವ ಸಂತೋಷ ಲಾಡ ಬೆಂಬಲಿಗರ ವರ್ಚಸ್ಸು ಮತ್ತಷ್ಟು ಹೆಚ್ಚಾಗುವಂತಾಗಿದೆ.
ಕಲಘಟಗಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆದ್ದು ಬಂದಿರುವುದು ಕಂಡು ಬರುತ್ತಿದ್ದು, ಇನ್ನೇರಡು ದಿನದಲ್ಲಿ ಸ್ಪಷ್ಟವಾದ ಚಿತ್ರಣ ದೊರೆಯಲಿದೆ. ಈಗಾಗಲೇ, ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿರುವುದಂತೂ ಸತ್ಯ.