ಕಲಘಟಗಿ ಬೀರವಳ್ಳಿಗೆ ಬಂದಿದ್ದಾರೆ ಏಳು ಗಜರಾಜರು.. ರೈತರು ಕಂಗಾಲು..
1 min read
ಧಾರವಾಡ: ನಿರಂತರವಾಗಿ ಹೆಚ್ಚಾಗುತ್ತಿರುವ ಚಳಿಯ ನಡುವೆಯೂ ಗಜ ಪಡೆಯೊಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೀರವಳ್ಳಿ ಗ್ರಾಮದ ಬಳಿ ಕಂಡು ಬಂದಿದ್ದು, ರೈತಾಪಿ ಕುಟುಂಬಗಳ ಇವುಗಳ ಹಾವಳಿಯಿಂದ ಕಂಗಾಲಾಗಿ ಕಣ್ಣೀರಿಡುವಂತಾಗಿದೆ. ಇದನ್ನ ತಪ್ಪಿಸಲು ಪೊಲೀಸರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಹೊರಟಿದ್ದಾರೆ.
ಒಂದೇ ಬಾರಿ ಏಳು ಆನೆಗಳು ಕಾಣಿಸಿಕೊಂಡಿದ್ದು, ಕಬ್ಬಿನ ಹೊಲದಂಚಿನಲ್ಲಿ ನಿಂತು ಬೆಳೆಯನ್ನ ಸಂಪೂರ್ಣವಾಗಿ ಹಾಳು ಮಾಡುತ್ತಿದ್ದು, ಕಾಡಿಗೆ ಕಳಿಸಲು ಆಗದೇ ಅರಣ್ಯ ಇಲಾಖೆಯವರ ಆಗಮನಕ್ಕಾಗಿ ಕಾಯುತ್ತಿರುವ ಪ್ರಸಂಗ ಬಂದಿದೆ.
ಕಲಘಟಗಿ ತಾಲೂಕಿನ ಬೀರವಳ್ಳಿ ಗ್ರಾಮಕ್ಕೆ ಅಂಟಿಕೊಂಡೇ ಅರಣ್ಯ ಪ್ರದೇಶವಿದ್ದು, ಇಷ್ಟೊಂದು ಪ್ರಮಾಣದಲ್ಲಿ ಆನೆಗಳ ಹಿಂಡು ಒಮ್ಮೆಲೆ ಬಂದಿರುವುದು ಕೆಲವರಿಗೆ ರೋಮಾಂಚನವನ್ನುಂಟು ಮಾಡಿದರೇ, ಹೊಲದ ಮಾಲೀಕರಿಗೆ ಕಣ್ಣೀರು ಬರಿಸುತ್ತಿದೆ.
ಸುಮಾರು 2 ಗಂಟೆಯಿಂದಲೂ ಬೀರವಳ್ಳಿಯ ಸುತ್ತಮುತ್ತ ತಿರುಗುತ್ತಿದ್ದು, ಅವುಗಳನ್ನ ಬೆದರಿಸಿ ಕಾಡಿನತ್ತ ಕಳಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬರಬೇಕಾಗಿದ್ದು, ಅವರಿಗಾಗಿ ಜಮೀನು ಮಾಲೀಕರು ಕಾಯುತ್ತಿದ್ದಾರೆ. ಸ್ಥಳಕ್ಕೆ ಕಲಘಟಗಿ ಠಾಣೆಯ ಪೊಲೀಸರು ದೌಡಾಯಿಸುತ್ತಿದ್ದಾರೆ.