Posts Slider

Karnataka Voice

Latest Kannada News

ಜಗದೀಶ ಶೆಟ್ಟರಗೆ ಎಚ್ಚರಿಕೆ ನೀಡಿದ ಇಸ್ಮಾಯಿಲ ತಮಾಟಗಾರ

1 min read
Spread the love

ಧಾರವಾಡ: ಮಹಾರಾಷ್ಟ್ರದ ಥಾಣೆಯಿಂದ ಚೆನ್ನೈವರೆಗಿನ 1235ಕಿ.ಮೀ. ಉದ್ದದ ಸುವರ್ಣ ಚತುಷ್ಪಥ ರಸ್ತೆಯಲ್ಲಿ ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ಕ್ರಾಸ್‌ವರೆಗಿನ 29.04ಕಿ.ಮೀ. ಉದ್ದನೆಯ ರಸ್ತೆ ಮಾತ್ರ ಕಿರಿದಾದ ರಸ್ತೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಸಂಸ್ಥೆ ನಿರ್ಮಿಸಿರುವ ಈ ರಸ್ತೆ ಇಲ್ಲಿಯವರೆಗೂ 450ಕ್ಕೂ  ಹೆಚ್ಚು ಜನರ ಬಲಿ ಪಡೆದಿದ್ದು ಕೂಡಲೇ ಇದನ್ನು ವಿಸ್ತರಿಸಲು ಧಾರವಾಡ ಅಂಜುಮನ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಆಗ್ರಹಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಧ್ಯೆ ಬೈಪಾಸ್ ರಸ್ತೆಗೆ ಪ್ರಸಕ್ತ ಸಂಚಾರ ದಟ್ಟಣೆ ಲಕ್ಷದಲ್ಲಿಟ್ಟುಕೊಂಡಲ್ಲಿ ಅಷ್ಟಪಥ ರಸ್ತೆ ಅನಿವಾರ್ಯವಾಗಿದೆ. ಅದನ್ನು ರಾಷ್ಟ್ರೀಯ ಹೆದ್ದಾರಿ 48ಕ್ಕೆ ಜೋಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ರಸ್ತೆ ಮಾತ್ರ ದ್ವಿಪಥವಾಗಿದೆ. ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ಸಾವಿರಾರು ವಾಣಿಜ್ಯ ವಾಹನಗಳ ಚಲನೆಯಿಂದಾಗಿ, ಹಲವಾರು ಅಪಘಾತಗಳಿಗೆ ಕಾರಣವಾಗುತ್ತಿದ್ದು ಜ.15ರಂದು ಟೆಂಪೊ ಟ್ರಾವೆಲರ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ 11 ಜನ ಮೃತಪಟ್ಟಿರುವುದು ಇಲ್ಲಿನ ವಾಸ್ತವತೆಗೆ ಕೈಗನ್ನಡಿಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಅವರು ಆದ್ಯತೆ ಮೇಲೆ ಈ ರಸ್ತೆ ವಿಸ್ತರಣೆಗೆ ಕ್ರಮಗೈಗೊಳ್ಳದೆ ಹೋದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ದಾಖಲೆಗಳ ಪ್ರಕಾರ 10 ವರ್ಷಗಳಲ್ಲಿ 175ಕ್ಕೂ ಅಧಿಕ ಜನ ಈ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅಸುನೀಗಿದ್ದಾರೆ. 645ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಂಕಿ ಅಂಶ ಸಹಿತ ಸಚಿವರ ಗಮನ ಸೆಳೆದಿದ್ದಾರೆ.

2016ರ ಜನವರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಅವರ ಪುತ್ರ ಹಾಗೂ ಸೊಸೆ ಮೃತಪಟ್ಟಿದ್ದರು. 2020ರ ಜ.26ರಂದು ಕುಂದಗೋಳದ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಅವರೂ ಇದೇ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದನ್ನು ಸ್ಮರಿಸಬಹುದು ಎಂದು ತಮಾಟಗಾರ ಹೇಳಿದ್ದಾರೆ.

ಅಪಘಾತ ವಲಯ ಎಂದು ಇಲ್ಲಿ ಫಲಕ ಹಾಕಲಾಗಿದೆ. ಆದರೂ, ಅಪಘಾತ ಸಂಭವಿಸಿದಾಗಷ್ಟೇ ಚರ್ಚೆಯ ಮುನ್ನೆಲೆಗೆ ಬರುವ ಬೈಪಾಸ್ ವಿಸ್ತರಣೆ ಮತ್ತೊಂದು ಅಪಘಾತದವರೆಗೂ ಗೌಣವಾಗುತ್ತದೆ. ಪ್ರಯಾಣಿಕರು ಮಾತ್ರ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ಶೀಘ್ರ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


Spread the love

Leave a Reply

Your email address will not be published. Required fields are marked *