Posts Slider

Karnataka Voice

Latest Kannada News

ಹೋರಾಟ ಮಾಡಿದವರೇ ಹಕ್ಕು ಪತ್ರ ವಿತರಿಸಿದ ಐತಿಹಾಸಿಕ ದಿನ: ಅಂದು ಹೋರಾಡಿದ್ದ ಮುನೇನಕೊಪ್ಪ ಇಂದು ಸಚಿವರು…!

1 min read
Spread the love

ಕೈಮಗ್ಗ ಮತ್ತು ಜವಳಿ , ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬ ಪಾಟೀಲ ಮುನೇನಕೊಪ್ಪ ಮಾತನಾಡಿ, 20 ವರ್ಷಗಳ ಹಿಂದೆ ಕೊಳಚೆ ಪ್ರದೇಶದ ನಿವಾಸಿಗಳ ಹಕ್ಕುಗಳಿಗೆ ಹೋರಾಟ ಮಾಡಲಾಗಿತ್ತು. ಈ ಹಿಂದೆ ಭಾರತ್ ಮಿಲ್ ನಿವಾಸಿಗಳಿಗೆ ಪರಿಚಯ ಪತ್ರ ನೀಡಲಾಗಿತ್ತು. ಈ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ ಎಂದರು.

ಹುಬ್ಬಳ್ಳಿ: ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ರಾಜದ 3.37 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ವಸತಿ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದರು.

ಕರ್ನಾಟಕ ಕೊಳಗೀರಿ ಅಭಿವೃದ್ಧಿ ಮಂಡಳಿ ವತಿಯಿಂದ ಹುಬ್ಬಳ್ಳಿ ಚಾಮುಂಡೇಶ್ವರಿನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ( ಪಿ.ಎಂ.ಎ.ವೈ – ಹೆಚ್.ಎಫ್.ಎ ) 224 ನೂತನ ಮನೆಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

8626 ಎಕರೆ ಸರ್ಕಾರಿ ಜಾಗದ ಕೊಳಚೆ ಪ್ರದೇಶದಲ್ಲಿ, ಬಹುದಿನಗಳಿಂದ 3.37 ಲಕ್ಷ ಕುಟುಂಬಗಳು ವಾಸವಾಗಿದ್ದವು. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ,ಈ ಕುಟುಂಬಗಳಿಗೆ ಅಗತ್ಯ ಸೌಕರ್ಯ ಒದಗಿಸಿ ಶಾಶ್ವತವಾದ ಹಕ್ಕುಪತ್ರ ನೀಡುವ ಐತಿಹಾಸಿಕ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಹಿಂದೆ ನಮ್ಮ ಸರ್ಕಾರವಿದ್ದಾಗ 6 ಲಕ್ಷ ಮನೆಗಳ ನಿರ್ಮಾಣಕ್ಕೆ 3315 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ 4 ಸಾವಿರ ಕೋಟಿಯಲ್ಲಿ 2.57 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ನಗರ ಪ್ರದೇಶದಲ್ಲಿ 3.40 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಿದ್ದು, ಮುಂದಿನ ತಿಂಗಳ ಒಳಗಾಗಿ 35 ಸಾವಿರ ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಸಲಹೆಯಂತೆ ವಸತಿ ಹಕ್ಕುಪತ್ರ ವಿತರಣೆಗೆ ಎಸ್.ಸಿ.ಹಾಗೂ ಎಸ್.ಟಿ.ಗಳಿಗೆ ನಿಗದಿ ಪಡಿಸಿದ್ದ 2 ಸಾವಿರ ಶುಲ್ಕವನ್ನು 1 ಸಾವಿರಕ್ಕೆ ಹಾಗೂ ಇತರರಿಗೆ ನಿಗದಿ ಪಡಿಸಿದ್ದ 4 ಸಾವಿರ ಶುಲ್ಕವನ್ನು 2 ಸಾವಿರಕ್ಕೆ ಇಳಿಸಲಾಗುವುದು. ಹಕ್ಕುಪತ್ರ ಪಡೆದ ಎಲ್ಲರೂ ನಿವೇಶನವನ್ನು ಮುದ್ರಾಂಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹಕ್ಕುಪತ್ರಗಳನ್ನು ಹೆಣ್ಣುಮಕ್ಕಳ ಹೆಸರಿಗೆ ನೋಂದಣಿ ಮಾಡಿಕೊಡಲಾಗುವುದು. ಚಾಮುಂಡೇಶ್ವರಿ ನಗರದಲ್ಲಿ 224 ಮನೆಗಳನ್ನು ಫಲಾನುಭವಿಗಳು ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ವಂತಿಕೆಯಿಂದ ನಿರ್ಮಿಸಲಾಗುತ್ತಿದೆ. ಹಕ್ಕುಪತ್ರ ಪಡೆದುಕೊಂಡವರು ಜಾಗದಲ್ಲಿ ಉತ್ತಮ ಮನೆ ಕಟ್ಟಿಕೊಂಡು ವಾಸ ಮಾಡಿ, ಆಸ್ತಿಯನ್ನು ಮಾರಾಟ ಮಾಡಬೇಡಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್, ಇಂದು ಚಾಮುಂಡೇಶ್ವರಿ ನಗರದಲ್ಲಿ ಹಬ್ಬದ ವಾತಾವರಣವಿದೆ. ನಗರಕ್ಕೆ ವಿದ್ಯುತ್ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ಹಿಂದೆ ಸಚಿವನಿದ್ದಾಗ ವಸತಿ ಸಚಿವರೊಂದಿಗೆ ಸಚಿವ ಸಂಪುಟದಲ್ಲಿ ಹಕ್ಕು ಪತ್ರ ನೀಡಲು ಪ್ರತಿಪಾದನೆ ಮಾಡಿದ್ದೆ. ಇದರಂತೆ ಮಾದವನಗರ, ತೊರವಿಹಕ್ಕಲು, ಗಾಂಧಿವಾಡ, ಮಾರುತಿ ನಗರ, ಬೆಂಗೇರಿ, ಲೋಕಪ್ಪನಹಕ್ಕಲಿನ ವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ. ಸರ್ಕಾರ‌ ಗಿರಣಿ ಚಾಳದ ಮನೆಗಳನ್ನು ಕೆಡವಲು ನೋಟಿಸ್ ನೀಡಿದಾಗ, ಗಿರಿಣಿ ಚಾಳದ ವಾಸಿಗಳ ಹಕ್ಕೊತ್ತಾಯಕ್ಕಾಗಿ ಹೋರಾಟ ಮಾಡಲಾತು. ಕೊಳಚೆ ಮಂಡಳಿಯಿಂದ ಪ್ರತಿ ಮನೆಗಳ ಸರ್ವೇ ಮಾಡಿ, ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ. ಸರ್ಕಾರದ ಜಾಗದಲ್ಲಿ ಇದ್ದವರಿಗೆ ಈಗ ಹಕ್ಕುಪತ್ರ ನೀಡಲಾಗುತ್ತಿದೆ. ಆದರೆ ಖಾಸಗಿ ಜಮೀನುಗಳು‌ ಅಥವಾ ಲೇ ಔಟ್‌ಗಳಲ್ಲಿ ಮನೆ ನಿರ್ಮಿಸಿಕೊಂಡವರಿಗೂ ಹಕ್ಕು ಪತ್ರ ನೀಡುವ ಹಾಗೂ ಜಾಗದ ಮಾಲಿಕತ್ವವನ್ನು ನೀಡುವ ಕೆಲಸವಾಗಬೇಕು. ಖಾಸಗಿ ಭೂಮಿಯನ್ನು ಸ್ವಾಧೀನ ಮಾಡಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಖಾಸಗಿ ಮಾಲಿಕರಿಂದ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಆಸ್ತಿಯನ್ನು ಪರಭಾರೆ ಮಾಡಿಸಿ, ಅವರಿಂದ ನಿವಾಸಿಗಳಿಗೆ ನೋಂದಣಿ ಮಾಡಬೇಕು. 94 ಸಿ ಅಡಿ ಅಕ್ರಮ ಸಕ್ರಮ ಹಾಗೂ ಅರಣ್ಯ ಪ್ರದೇಶ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡಬೇಕು ಎಂದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರ ಶಾಸಕ ಮಹೇಶ್ ಈರನಗೌಡ ಕುಮಠಳ್ಳಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಶಿ . ಜಡಿ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ಅಧ್ಯಕ್ಷ ಸಿದ್ಧನಗೌಡ ಈಶ್ವರಗೌಡ ಚಿಕ್ಕನಗೌಡ್ರು, ವಿಧಾನ ಪರಿಷತ್ ಶಾಸಕ ಪ್ರದೀಪ ಶೆಟ್ಟರ , ಹುಡಾ ಅಧ್ಯಕ್ಷ ನಾಗೇಶ ಪುಂಡಲಿಕಸಾ ಕಲಬುರ್ಗಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಸದಸ್ಯರಾದ ಎಸ್ . ಕ್ರಾಂತಿರಾಜ, ಎಂ.ನಾರಾಯಣಪ್ಪ , ಗಂಗಾಧರ್, ಕೆ.ಎಸ್. ಗೀತಾರವೀಂದ್ರ , ನಾಗರಾಜ್.ಎನ್.ಬಿರಾದಾರ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ.ವೆಂಕಟೇಶ್, ಪಾಲಿಕೆ ಸದಸ್ಯರಾದ ಸೀಮಾ ಮೊಗಲಿ ಶೆಟ್ಟರ್, ವೀರಣ್ಣ ಸವಡಿ, ಸಂತೋಷ್ ಚವ್ಹಾಣ್, ರೂಪ‌ ಶೆಟ್ಟರ್ ಚಾಮುಂಡೇಶ್ವರಿ ಕ್ಷೇತ್ರದ ಪಂಚ ಕಮೀಟಿ ಅಧ್ಯಕ್ಷ ಪರುಶುರಾಮ್ ಮಳ್ಯಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಸ್ವಾತಂತ್ರ್ಯೋತ್ಸವದ 75 ನೇ ಆಚರಣೆ ವೇಳಗೆ ದೇಶದ ಸರ್ವರಿಗೂ ಸೂರು ಕಲ್ಪಿಸುವ ಸಂಕಲ್ಪ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಪ್ರಧಾನಿ ನರೇಂದ್ರ ಮೋದಿಯವರು 2022ರ ಭಾರತದ 75ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ದೇಶದ ಸರ್ವರಿಗೂ ಸೂರು ಕಲ್ಪಿಸುವ ಸಂಕಲ್ಪ ಹೊಂದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿ ಚಾಮುಂಡೇಶ್ವರಿ ನಗರದಲ್ಲಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ಪಿ.ಎಂ.ಎ.ವೈ – ಹೆಚ್.ಎಫ್.ಎ ನಡಿ 224 ನೂತನ ಮನೆಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ 6.5 ಕೋಟಿ ಜನರು ಕೊಳಚೆ ಪ್ರದೇಶದಲ್ಲಿ ವಾಸಗಿದ್ದಾರೆ. ಕೇಂದ್ರ ಸರ್ಕಾರ 1.13 ಕೋಟಿ ಮನೆಗಳ ನಿರ್ಮಾಕ್ಕೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 50 ಲಕ್ಷ ಮನೆಗಳ ನಿರ್ಮಾಣವಾಗಿದೆ. ಕಳೆದ 7 ವರ್ಷಗಳಲ್ಲಿ 2 ಲಕ್ಷ ಕೋಟಿ ರೂಪಾಯಿಗಳನ್ನು ಭಾರತ ಸರ್ಕಾರ ಮನೆ ನಿರ್ಮಾಣಕ್ಕೆ ನೀಡಿದೆ. ಗರಿಭಿ ಹಟಾವೋ, ರೋಟಿ ಕಪಡಾ ಮಖಾನ್ ಎಂದು ಭಾಷಣ ಮಾಡಿದವರ ಕಾಲದಲ್ಲೂ ಇಷ್ಟು ಮನೆಗಳನ್ನು ನಿರ್ಮಿಸಲಿಲ್ಲ. ನರೇಂದ್ರ ಮೋದಿಯವರು ಅಧಿಕಾರಿಕ್ಕೆ ಬಂದ ನಂತರ 18700 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು. 3 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕಡಿಮೆ ದರ ಹಾಗೂ ಉಚಿತವಾಗಿ ಎಲ್.ಇ.ಡಿ ಬಲ್ಪು ಹಂಚಿಕೆ ಮಾಡಲಾಗಿದೆ. ಜಲಜೀವನ್ ಮಿಷನ್ ಅಡಿ ಧಾರವಾಡ ಜಿಲ್ಲೆಯ ಎಲ್ಲಾ ಮನೆಗಳಿಗೆ ಶುದ್ದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ 3897 ಮೆನಗಳ ಹಂಚಿಕೆ ಮಾಡಲಾಗಿದೆ. ಸ್ವಚ್ಛ ಭಾರತ ಹಾಗೂ ಅಮೃತ ಯೋಜನೆಯಡಿ ಹುಬ್ಬಳ್ಳಿ ಧಾರವಾಡ ನಗರದ ಸ್ವಚ್ಛತೆ ಆದ್ಯಾತೆ ನೀಡಲಾಗುದು. ಎನ್.ಟಿ.ಪಿ.ಸಿ.ಎಲ್ ವತಿಯಿಂದ 45 ಕೋಟಿ ವೆಚ್ಚದಲ್ಲಿ ಗಬ್ಬರೂ ನ ಬಳಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ನಿರ್ಮಾಣ ಮಾಡಲಾಗುವುದು ಎಂದರು.


Spread the love

Leave a Reply

Your email address will not be published. Required fields are marked *