ಶಾಂತವಾಗಿದ್ದ ವಾಣಿಜ್ಯ ನಗರಿಯಲ್ಲಿ ಎರಡು ಕಡೆ ಚೂರಿ ಇರಿತ
1 min read
ಹುಬ್ಬಳ್ಳಿ: ಯಾವುದೇ ರಗಳೆಗಳಿಲ್ಲದೇ ಕಳ್ಳತನ, ಸರಗಳ್ಳತನದಂತಹ ಪ್ರಕರಣಗಳು ನಡೆಯುತ್ತಿದ್ದಾಗಲೇ ಇದೀಗ ಚೂರಿ ಇರಿತದ ಪ್ರಕರಣಗಳು ನಡೆಯುತ್ತಿದ್ದು, ಒಂದೇ ರಾತ್ರಿಯಲ್ಲಿ ಎರಡು ಪ್ರದೇಶಗಳಲ್ಲಿ ಚೂರಿ ಇರಿತವಾಗಿ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿವೆ.
ಹಳೇಹುಬ್ಬಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯ ಟಿಪ್ಪುನಗರದಲ್ಲಿ ಶೋಯಬ್ ಅಬ್ಬನ್ನವರ ಎಂಬ ಯುವಕನಿಗೆ ಚೂರಿ ಹಾಕಿದ್ದು, ತೀವ್ರ ರಕ್ತಸ್ರಾವವಾಗಿ ಕಿಮ್ಸಗೆ ದಾಖಲು ಮಾಡಲಾಗಿದೆ. ಗಾಯಾಳುವುನಿಂದ ಮಾಹಿತಿ ಪಡೆದು ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದು, ಟಿಪ್ಪು ನಗರದಲ್ಲಿ ಈ ಘಟನೆ ಕೆಲಕಾಲ ಗೊಂದಲವನ್ನ ಸೃಷ್ಟಿಸಿತ್ತು.
ಇನ್ನೊಂದು ಪ್ರಕರಣ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಧವ ನಗರದಲ್ಲಿ ಕೂಡಾ ಚೂರಿ ಹಾಕಲಾಗಿದೆ. ರಮೇಶ ಕಟ್ಟಿಮನಿ ಎಂಬ ಯುವಕನಿಗೆ ಪಕ್ಕಡಿ ಮತ್ತು ಎದೆ ಭಾಗದಲ್ಲಿ ಚಾಕು ಇರಿಯಲಾಗಿದ್ದು, ಚಿಕಿತ್ಸೆಗಾಗಿ ಕಿಮ್ಸಗೆ ರವಾನೆ ಮಾಡಲಾಗಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಒಂದೇ ಥರದ ಘಟನೆಗಳು ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ನಡೆದಿದ್ದು, ಸೋಜಿಗವಾಗಿದ್ದು, ಆರೋಪಿಗಳನ್ನ ಹೆಡಮುರಿಗೆ ಕಟ್ಟುವ ಮೂಲಕ ಪೊಲೀಸರು ಚಾಕು ಇರಿದವರಿಗೆ ಬೇಗನೇ ಪಾಠ ಕಲಿಸಬೇಕಿದೆ.