ಕುತೂಹಲ ಮೂಡಿಸಿದ್ದ ಹುದ್ದೆಗೆ ನೇಮಕ ಮಾಡಿದ ಸಿಎಂ ಯಡಿಯೂರಪ್ಪ
1 min read
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ನೂತನ ಮಾಧ್ಯಮ ಸಲಹೆಗಾರರಾಗಿ ಯಾರು ನೇಮಕವಾಗುತ್ತಾರೆ ಎಂಬ ವಿಚಾರ ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ವಾರ್ತಾ ಇಲಾಖೆಯ ನಿವೃತ್ತ ನಿರ್ದೇಶಕ ಎನ್. ಭೃಂಗೀಶ್ ಅವರನ್ನ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ನೇಮಕವಾಗುವ ಮೂಲಕ ಅದಕ್ಕೆ ತೆರೆ ಬಿದ್ದಿದ್ದು, ಭೃಂಗೀಶ್ ಅವರನ್ನು ತಮ್ಮ ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ.
ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾಗಿದ್ದಾಗ ಸಿಎಂ ಯಡಿಯೂರಪ್ಪ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಭೃಂಗೀಶ್ ಅವರು ಕೆಲಸ ಮಾಡಿದ್ದರು. ಅದೇ ಹಿನ್ನೆಲೆಯಲ್ಲಿ ಅವರನ್ನು ಇದೀಗ ನೂತನ ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ವಾರ್ತಾ ಇಲಾಖೆಯಲ್ಲಿ ಸುದೀರ್ಘ 30 ವರ್ಷಗಳ ಸೇವೆಯ ಬಳಿಕ ಕಳೆದ ಏಪ್ರಿಲ್ ತಿಂಗಳಿನಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು. ತಮ್ಮ 30 ವರ್ಷಗಳ ಸೇವೆಯಲ್ಲಿ 25 ವರ್ಷಗಳಷ್ಟು ಸುಧೀರ್ಘವಾಗಿ ಮುಖ್ಯಮಂತ್ರಿಗಳ ಸಚಿವಾಯಲದಲ್ಲಿಯೇ ಭೃಂಗೀಶ್ ಅವರು ಸೇವೆ ಸಲ್ಲಿಸಿದ್ದಾರೆ.
1990ರಲ್ಲಿ ರಾಜ್ಯ ವಾರ್ತಾ ಇಲಾಖೆ ಸೇರಿದ್ದ ಭೃಂಗೀಶ್ ಅವರು 10ಕ್ಕೂ ಹೆಚ್ಚು ಮುಖ್ಯಮಂತ್ರಿಗಳಿಗೆ ಮಾಧ್ಯಮ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಅಪಾರ ಅನುಭವವನ್ನು ಹೊಂದಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆಗೆ ಕೆಲ ದಿನಗಳ ಹಿಂದಷ್ಟೆ ಮಹಾದೇವ್ ಪ್ರಕಾಶ್ ಅವರು ರಾಜೀನಾಮೆ ನೀಡಿದ್ದರು.