ರಿಕ್ರಿಯೇಶನ್ ಕ್ಲಬ್- ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ
1 min read
ಕೊಪ್ಪಳ: ರಾಜ್ಯದಲ್ಲಿರುವ ರಿಕ್ರಿಯೇಶನ್ ಕ್ಲಬಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಂದಾಗಿ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ ಉಂಟಾಗುತ್ತಿದೆ. ಕೂಡಲೇ ಕಾನೂನಿನ ಬದಲಾವಣೆ ತರಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಕ್ಲಬಗಳಲ್ಲಿ ಏನೂ ಮಾಡಿದರೂ ನಡೆಯತ್ತೆ ಎಂಬ ಭಾವನೆಯಿದೆ. ಇದನ್ನ ಪರಿಶೀಲನೆ ನಡೆಸಿದ್ದೇವೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಪೊಲೀಸ್ ಇಲಾಖೆಗಿದೆ. ಅಂಥ ಕ್ಲಬಗಳಿಂದ ಉತ್ತಮ ರೀತಿಯಲ್ಲಿ ನಡೆಯುವ ರಿಕ್ರೆಯೇಶನ್ ಕ್ಲಬಗಳಿಗೂ ತೊಂದರೆಯಾಗುತ್ತಲಿದೆ ಎಂದರು.
ಸರಕಾರ ಇದನ್ನ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲಿಯೇ ಕಾನೂನು ಕಟ್ಟಳೆಗಳನ್ನು ಹೇರಲಾಗುತ್ತದೆ ಎಂದ ಬೊಮ್ಮಾಯಿಯವರು, ರಾಜ್ಯದಲ್ಲಿ ಡ್ರಗ್ ಮಾಫಿಯಾವನ್ನ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ. ಇದಕ್ಕಾಗಿಯೇ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಗೃಹ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಬರುವ ದಿನಗಳಲ್ಲಿ ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಪೊಲೀಸ್ ವಸತಿಗೃಹಗಳಲ್ಲಿನ ತೊಂದರೆಗಳ ಬಗ್ಗೆ ಗಮನಕ್ಕೆ ಬಂದಿದ್ದು, ಅದನ್ನೂ ಸರಿಪಡಿಸಲು ಕ್ರಮವನ್ನ ಜರುಗಿಸಲಾಗಿದೆ ಎಂದು ಸಚಿವರು ಹೇಳಿದರು.