ಹೆಬಸೂರಿನ ಜಮಖಾನಾ ಮಾರಾಟಕ್ಕೆ ಹೋಗಿದ್ದ “ಅಶೋಕಣ್ಣ” ಇನ್ನಿಲ್ಲ
1 min read
ಧಾರವಾಡ: ಪ್ರಸಿದ್ಧ ಹೆಬಸೂರು ಜಮಾಖಾನಾಗಳನ್ನ ಮಾರಾಟ ಮಾಡಲು ಹೋಗಿದ್ದ ವ್ಯಕ್ತಿಯ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಅಣ್ಣಿಗೇರಿ ಪಟ್ಟಣದ ಬಂಗಾರಪ್ಪನಗರದ ಬಳಿ ಸಂಭವಿಸಿದೆ.
ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಅಶೋಕ ಫಕ್ಕೀರಪ್ಪ ಇಂಗಳಳ್ಳಿ ಎಂಬ ವ್ಯಕ್ತಿಯೇ ಸಾವಿಗೀಡಾಗಿದ್ದು, ತಮ್ಮೂರಿನ ಜಮಖಾನಾಗಳನ್ನ ಮಾರಾಟ ಮಾಡಿ, ಮರಳಿ ಬರುವಾಗ ಈ ದುರ್ಘಟನೆ ಸಂಭವಿಸಿದೆ.
ಗದಗ ಮೂಲದ ಲಲಿತಾ ಅಳವಂಡಿ ಎಂಬುವವರಿಗೆ ಸೇರಿದ ಕಾರು ಹಿಂಬದಿಯಿಂದ ಟಿವಿಎಸ್ ಎಕ್ಸಲ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಭಾರವಾದ ಗಂಟಿನೊಂದಿಗೆ ಹೋಗುತ್ತಿದ್ದ ಅಶೋಕ, ಅವರು ಆಯತಪ್ಪಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಣ್ಣಿಗೇರಿ ಠಾಣೆಯ ಸಬ್ ಇನ್ಸಪೆಕ್ಟರ್ ಜೂಲಕಟ್ಟಿ, ಮೃತ ವ್ಯಕ್ತಿಯ ಶವವನ್ನ ಸರಕಾರಿ ಆಸ್ಪತ್ರೆಗೆ ರವಾನಿಸಿದರು. ಕಾರು ಚಾಲಕ ನಾಪತ್ತೆಯಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.